VIDYAVANI

Education and Career

ಶನಿವಾರ, ನವೆಂಬರ್ 8, 2025

Friendship: ಸ್ನೇಹಿತರನ್ನು ಎಚ್ಚರಿಕೆಯಿಂದ ಆಯ್ದುಕೊಳ್ಳುವುದೇ ಉತ್ತಮ ಭವಿಷ್ಯಕ್ಕೆ ತಳಪಾಯ

  VIDYAVANI       ಶನಿವಾರ, ನವೆಂಬರ್ 8, 2025
Friendship: ಸ್ನೇಹಿತರನ್ನು ಎಚ್ಚರಿಕೆಯಿಂದ ಆಯ್ದುಕೊಳ್ಳುವುದೇ ಉತ್ತಮ ಭವಿಷ್ಯಕ್ಕೆ ತಳಪಾಯ



ಅವನು ಸಹವಾಸ ದೋಷದಿಂದ ಕೆಟ್ಟುಹೋದ! ಹೀಗೊಂದು 'ಮಾತನ್ನು ಹಿರಿಯರು ಯಾರ ಬಗ್ಗೆಯಾದರೂ ಹೇಳುವುದನ್ನು ನೀವೂ ಕೇಳಿರುತ್ತೀರಿ. ಸಹವಾಸ ದೋಷ ಅಂದರೇನು? ಕೆಟ್ಟ ಗೆಳೆಯರ ಸಹವಾಸದಿಂದ ಒಬ್ಬ ವ್ಯಕ್ತಿ ಹಾಳಾಗುವುದು. ಬಾಲ್ಯದಲ್ಲಿ ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳುವಾಗ ನಾವು ಬಹಳ ಎಚ್ಚರ ವಹಿಸಬೇಕು. ಒಳ್ಳೆಯ ಸ್ನೇಹಿತರನ್ನು ಆಯ್ಕೆ ಮಾಡಿಕೊಂಡರೆ ಅವರು ನಮ್ಮ ಬೆಳವಣಿಗೆಗೆ ಪ್ರೋತ್ಸಾಹ ನೀಡುತ್ತಾರೆ. ಅವರಲ್ಲಿರುವ ಒಳ್ಳೆಯ ಗುಣಗಳನ್ನು ನಮಗೂ ಹಂಚುತ್ತಾರೆ.

ಕಾದ ಕಬ್ಬಿಣದ ಚೂರಿನ ಮೇಲೆ ಬಿದ್ದ ನೀರಿನ ಹನಿ ತನ್ನ ಗುರುತೇ ಸಿಗದಂತೆ ಆರಿಹೋಗುತ್ತದೆ. ಅದೇ ನೀರಿನ ಹನಿ ಕಮಲದ ಎಲೆಯ ಮೇಲೆ ಬಿದ್ದರೆ ಸೂರ್ಯನ ಬೆಳಕಿನಲ್ಲಿ ಮುತ್ತಿನಂತೆ ಹೊಳೆಯುತ್ತದೆ. ಅದೇ ನೀರಿನ ಹನಿ ಸ್ವಾತಿ ಮಳೆಯ ಸಮಯದಲ್ಲಿ ಸಮುದ್ರದಲ್ಲಿರುವ ಕಪ್ಪೆಚಿಪ್ಪಿನ ಒಳಗೆ ಹೋದರೆ ಮುತ್ತಾಗಿ ರೂಪಾಂತರಗೊಳ್ಳುತ್ತದೆ. ಹೀಗೆ ಅಧಮ, ಮಧ್ಯಮ ಹಾಗೂ ಉತ್ತಮ ಗುಣಗಳು ನಮ್ಮ ಸಹವಾಸದಿಂದ ಬರುತ್ತವೆ ಎಂದು ಸಂಸ್ಕೃತದಲ್ಲೊಂದು ಸುಂದರೆ ಸುಭಾಷಿತವಿದೆ.

ನೀರಿನ ಹನಿಯು ಕಾದ ಕಬ್ಬಿಣದ ಸಹವಾಸ ಮಾಡಿದಾಗ ನಾಶವಾಗಿ ಹೋಯಿತು. ಅದು ಕಮಲದ ಎಲೆಯ ಸಹವಾಸ ಮಾಡಿದಾಗ ಮುತ್ತಿನಂತೆ ಹೊಳೆಯಿತು. ಅದೇ ನೀರಿನ ಹನಿಯು ಕಪ್ಪೆಚಿಪ್ಪಿನ ಸಹವಾಸ ಮಾಡಿದಾಗ ಮುತ್ತೇ ಆಗಿ ಹೊರಹೊಮ್ಮಿತು. ಹೀಗೆ ಕೆಟ್ಟವರು, ಮಧ್ಯಮರು ಹಾಗೂ ಒಳ್ಳೆಯವರ ಸಹವಾಸ ಮಾಡಿದರೆ ನಾವೂ ಅದಕ್ಕೆ ತಕ್ಕಂತೆ ರೂಪಾಂತರಗೊಳ್ಳುತ್ತೇವೆ.

ಎಷ್ಟು ಚೆನ್ನಾಗಿ ಹೇಳಿದ್ದಾರಲ್ಲವೇ? ನಾವು ಕೂಡ ಒಳ್ಳೆಯವರ ಸಹವಾಸ ಮಾಡಿದರೆ ಒಳ್ಳೆಯವರಾಗಿ ರೂಪುಗೊಳ್ಳುತ್ತೇವೆ. ಕೆಟ್ಟವರ ಸಹವಾಸ ಮಾಡಿದರೆ ಕೆಟ್ಟವರಾಗಿ ರೂಪುಗೊಳ್ಳುತ್ತೇವೆ.

ವಿದ್ಯಾರ್ಥಿ ಜೀವನವು ನಮ್ಮ ಬದುಕಿನಲ್ಲಿ ಆರಂಭಿಕ ಸ್ನೇಹಿತರನ್ನು ನೀಡುವ ಕಾಲಘಟ್ಟ. ಈ ಸಮಯದಲ್ಲೇ ನಮಗೆ ಹೊಸ ಸ್ನೇಹಿತರು ಸಿಗುತ್ತಾರೆ ಅಥವಾ ಈಗಾಗಲೇ ಇರುವ ಸ್ನೇಹಿತರು ದೂರವಾಗುತ್ತಾರೆ. ಈ ಸಮಯದಲ್ಲಿ ಸಿಕ್ಕ ಸ್ನೇಹಿತರು 'ಬಾಲ್ಯ ಸ್ನೇಹಿತರು' ಎಂದು ಕರೆಸಿಕೊಂಡು ನಮ್ಮ ಜೀವನದ ಕೊನೆಯ ತನಕ ಜೊತೆಯಲ್ಲಿರುತ್ತಾರೆ. ಅಥವಾ ನೆನಪಿನಲ್ಲಿ ಉಳಿಯುತ್ತಾರೆ. ಏಕೆಂದರೆ ಬಾಲ್ಯದಲ್ಲಿ ನಮಗೆ ಜೊತೆಯಾಗುವವರು ನಮ್ಮ ಮೇಲೆ ಅಷ್ಟೊಂದು ಪ್ರಭಾವ ಬೀರುತ್ತಾರೆ. ಉದಾಹರಣೆಗೆ, ನಿಮಗೆ ನಿಮಗೆ ಪುಸ್ತಕ ಓದುವ ಸ್ನೇಹಿತನೊಬ್ಬ ಸಿಗುತ್ತಾನೆ ಎಂದುಕೊಳ್ಳಿ. ಆಗ ನೀವೂ ಅವನ ಪ್ರಭಾವದಿಂದಾಗಿ ಪುಸ್ತಕಗಳನ್ನು ಓದಲು ಆರಂಭಿಸುತ್ತೀರಿ. ಅಥವಾ ನಿಮಗೆ ಕ್ರಿಕೆಟ್ ಆಡುವ ಒಬ್ಬ ಹುಡುಗನ ಜೊತೆಗೆ ಗೆಳೆತನವಾಗುತ್ತದೆ ಎಂದುಕೊಳ್ಳಿ. ಆಗ ನೀವೂ ಕ್ರಿಕೆಟ್ ಆಡತೊಡಗುತ್ತೀರಿ. ಹೀಗೆ ನಿಮಗೆ ಗೊತ್ತಿಲ್ಲದೆಯೇ ನೀವು ನಿಮ್ಮ ಸ್ನೇಹಿತನ ಹವ್ಯಾಸಗಳನ್ನು ರೂಢಿಸಿಕೊಳ್ಳುತ್ತೀರಿ. ಇದೇ ವೇಳೆ, ನಿಮ್ಮ ಸ್ನೇಹಿತ ಕೂಡ ನಿಮ್ಮ ಹವ್ಯಾಸಗಳನ್ನು ರೂಢಿಸಿಕೊಳ್ಳುತ್ತಾನೆ. ಇದೊಂದು ಸಹಜ ಪ್ರಕ್ರಿಯೆ. ಅದೇ ಸ್ನೇಹಿತ ಕೆಟ್ಟ ಗುಣಗಳನ್ನು ಹೊಂದಿದ್ದರೆ ಏನಾಗುತ್ತದೆ? ಉದಾಹರಣೆಗೆ, ನಿಮ್ಮ ಸ್ನೇಹಿತ ಕ್ಲಾಸಿಗೆ ಚಕ್ಕರ್ ಹೊಡೆದು ಊರು ಸುತ್ತಲು ಹೋಗುವ ಅಭ್ಯಾಸ ಬೆಳೆಸಿಕೊಂಡಿದ್ದಾನೆ ಎಂದಿಟ್ಟುಕೊಳ್ಳಿ. ಅದರಲ್ಲಿ ಎಷ್ಟೊಂದು ಮಜಾ ಇದೆ ಎಂದು ನಿಮಗೂ ಅವನು ನಂಬಿಸುತ್ತಾನೆ. ಅದನ್ನು ಕೇಳಿ ನೀವೂ ಕೂಡ ಟೀಚರ್‌ಗಳ ಕಣ್ಣುತಪ್ಪಿಸಿ ತಿರುಗಾಡಲು ಹೋಗಬಹುದು. ಆರಂಭದಲ್ಲಿ ಇಂತಹ ಚಟುವಟಿಕೆಗಳು ಮಜಾ ನೀಡಬಹುದು. ಆದರೆ ಇವು ಕೆಟ್ಟ ಗುಣಗಳು. ಬಾಲ್ಯದಲ್ಲಿ ಬೆಳೆಸಿಕೊಳ್ಳುವ ಇಂತಹ ಗುಣಗಳೇ ಮುಂದೆ ನಮ್ಮನ್ನು ಅಡ್ಡದಾರಿಯಲ್ಲಿ ಹೋಗುವಂತೆ ಮಾಡುತ್ತವೆ. ಕ್ಲಾಸಿಗೆ ಚಕ್ಕರ್ ಹೊಡೆದು ಸಿನಿಮಾ ನೋಡುತ್ತಾ, ಆಟವಾಡುತ್ತಾ ಬಾಲ್ಯದಲ್ಲಿ ಕಾಲ ಕಳೆದವರು ಮುಂದೆ ಕಾಲೇಜಿನಲ್ಲೂ ಅದನ್ನೇ ಮಾಡಿ ಓದಿನಲ್ಲಿ ಹಿಂದೆ ಬೀಳುತ್ತೀರಿ. ನಂತರ ಕೂಡ ಯಾವುದೇ ಕೆಲಸ ಮಾಡದೆ ಆಲಸ್ಯದಿಂದ ಬದುಕುವುದನ್ನು ರೂಢಿಸಿಕೊಳ್ಳುತ್ತೀರಿ. ಇದು ನಿಮ್ಮ ಭವಿಷ್ಯವನ್ನೇ ಹಾಳುಮಾಡುತ್ತದೆ.

ಈಗ ತಿಳಿಯಿತಲ್ಲವೇ. ನಮ್ಮ ಗೆಳೆಯರು ಹೇಗೆ ನಮ್ಮನ್ನು ಒಳ್ಳೆಯ ದಾರಿಯಲ್ಲಿ ಅಥವಾ ಕೆಟ್ಟ ದಾರಿಯಲ್ಲಿ ಕರೆದುಕೊಂಡು ಹೋಗುತ್ತಾರೆ ಎಂದು? ಹೀಗಾಗಿಯೇ ನಾವು ಸ್ನೇಹಿತರನ್ನು ತುಂಬಾ ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳಬೇಕು ಎಂದು ಹೇಳುವುದು. ಏಕೆಂದರೆ ಬಾಲ್ಯದಲ್ಲಿ ಬೆಳೆಸಿಕೊಂಡ ಒಳ್ಳೆಯ ಗುಣಗಳೇ ಕೊನೆಯವರೆಗೂ ನಮ್ಮನ್ನು ಕಾಪಾಡುತ್ತವೆ.

ಆದ್ದರಿಂದ ಶಾಲೆಯಲ್ಲಿ ಅಥವಾ ಹಾಸ್ಟೆಲ್‌ನಲ್ಲಿ ಒಳ್ಳೆಯ ಸ್ನೇಹಿತರನ್ನೇ ಆಯ್ಕೆ ಮಾಡಿಕೊಳ್ಳಿ, ಯಾರು ಹೆಚ್ಚೆಚ್ಚು ಓದುತ್ತಾರೋ, ಯಾರು ಕ್ಲಾಸಿನಲ್ಲಿ ಒಳ್ಳೆಯ ಮಾರ್ಕ್ಸ್ ತೆಗೆಯುತ್ತಾರೋ, ಯಾರು ಹಿರಿಯರಿಗೆ ಮತ್ತು ಟೀಚರ್‌ಗಳಿಗೆ ಗೌರವ ನೀಡುತ್ತಾರೋ, ಯಾರು ಒಳ್ಳೆಯ ಕೆಲಸಗಳನ್ನು ಮಾಡುತ್ತಾರೋ ಅಂತಹವರ ಜೊತೆ ಗೆಳೆತನ ಮಾಡಿ. ಅವರ ಜೊತೆಗೆ ಒಳ್ಳೆಯ ಸಂಗತಿಗಳ ಬಗ್ಗೆ ಮಾತನಾಡಿ. ಅವರ ಜೊತೆಗೆ ಒಳ್ಳೆಯ ಆಟಗಳನ್ನು ಆಡಿ. ಅವರ ಜೊತೆಗೆ ಒಳ್ಳೆಯ ಪುಸ್ತಕಗಳ ಬಗ್ಗೆ ಚರ್ಚೆ ಮಾಡಿ. ನಿಮಗೆ ಅರ್ಥವಾಗದ ಪಾಠವನ್ನು ಸ್ನೇಹಿತನಿಂದ ಕೇಳಿ ಅರ್ಥ ಮಾಡಿಕೊಳ್ಳಿ. ಅಥವಾ ಅವನಿಗೆ ಅರ್ಥವಾಗದ ಪಾಠವನ್ನು ನೀವು ಅವನಿಗೆ ಹೇಳಿಕೊಡಿ. ಹೀಗೆ ಗೆಳೆಯರ ಜೊತೆಗೆ ಕಳೆಯುವ ಉಪಯುಕ್ತ ಕ್ಷಣಗಳು ನಿಮ್ಮ ವ್ಯಕ್ತಿತ್ವವನ್ನು ರೂಪಿಸುತ್ತವೆ ಎಂಬುದು ನೆನಪಿರಲಿ.

ನಾವು ಏನಾಗಬೇಕು ಅಂದುಕೊಂಡಿದ್ದೇವೋ ಅದಕ್ಕೆ ತಕ್ಕಂತಹ ಗುಣಗಳಿರುವ ವ್ಯಕ್ತಿಗಳನ್ನೇ ಸ್ನೇಹಿತರನ್ನಾಗಿ ಆಯ್ಕೆ ಮಾಡಿಕೊಳ್ಳಬೇಕು. "ವಿದ್ಯಾರ್ಥಿಯಾಗಿದ್ದಾಗ ಮುಂದೆ ಏನಾದರೂ ದೊಡ್ಡ ಸಾಧನೆ ಮಾಡಬೇಕು ಎಂದು ಗುರಿ ಹಾಕಿಕೊಂಡ ಮಹತ್ವಾಕಾಂಕ್ಷಿ ಗೆಳೆಯನ ಜೊತೆಗೆ “ಸ್ನೇಹ ಮಾಡಿದರೆ ನೀವು ಕೂಡ ಅವರಂತೆ ಮುಂದೊಂದು ದಿನ ದೊಡ್ಡ ವ್ಯಕ್ತಿಯಾಗುವ ಗುರಿ ಇಟ್ಟುಕೊಂಡು ಬೆಳೆಯುತ್ತೀರಿ. ಕ್ರಮೇಣ ನೀವಿಬ್ಬರೂ ಒಳ್ಳೆಯ ವ್ಯಕ್ತಿಯಾಗಿ ಅಥವಾ ಸಾಧಕರಾಗಿ ಬೆಳೆಯುತ್ತೀರಿ.

ಇದರ ಬದಲಿಗೆ ವಿದ್ಯಾರ್ಥಿಯಾಗಿದ್ದಾಗ ಕೆಟ್ಟ ಗುಣಗಳುಳ್ಳ ಸ್ನೇಹಿತರ ಸಹವಾಸ ಮಾಡಿದರೆ ಆರಂಭದಲ್ಲಿ ನಿಮಗೆ ಸಣ್ಣಪುಟ್ಟ ಥಿಲ್ ಸಿಗಬಹುದು, ಆದರೆ ಕ್ರಮೇಣ ನೀವು ಕೂಡ ಕೆಟ್ಟ ವ್ಯಕ್ತಿಯಾಗಿ ಬೆಳೆಯುತ್ತೀರಿ. ಇದು ನಿಮ್ಮ ಬದುಕನ್ನೇ ಹಾಳುಮಾಡುತ್ತದೆ. 

ಒಂದು ಸಂಗತಿಯನ್ನು ನೆನಪಿಡಿ:
ಚಿಕ್ಕವರಿದ್ದಾಗ ನೀವು ಯಾವ ಗುಣಗಳನ್ನು ಬೆಳೆಸಿಕೊಳ್ಳುತ್ತೀರೋ ಅವು ನಿಮ್ಮ ಬದುಕಿನ ಕೊನೆಯವರೆಗೂ ನಿಮ್ಮ ಜೊತೆಗೆ ಇರುತ್ತವೆ. ಮತ್ತು ಒಳ್ಳೆಯ ಸ್ನೇಹಿತರು ಮಾತ್ರ ನಿಮ್ಮಲ್ಲಿ ಒಳ್ಳೆಯ ಗುಣಗಳು ಬೆಳೆಯಲು ಕಾರಣರಾಗುತ್ತಾರೆ. ಒಳ್ಳೆಯ ಸ್ನೇಹಿತರು ನಮ್ಮ ಉತ್ತಮ ಭವಿಷ್ಯಕ್ಕೆ ತಳಪಾಯ ಇದ್ದಂತೆ. ತಳಪಾಯ ಗಟ್ಟಿಯಿದ್ದರೆ ಮಾತ್ರ ಅದರ ಮೇಲೆ ಕಟ್ಟುವ ಮನೆಯೂ ಗಟ್ಟಿಯಾಗಿರುತ್ತದೆ. ನಿಮ್ಮ ತಳಪಾಯ, ಅರ್ಥಾತ್ ಬಾಲ್ಯ, ಗಟ್ಟಿಯಾಗಿದ್ದರೆ ನಿಮ್ಮ ಭವಿಷ್ಯವೂ ಗಟ್ಟಿಯಾಗಿರುತ್ತದೆ. ಹಾಗಿದ್ದರೆ ಒಳ್ಳೆಯ ಸ್ನೇಹಿತನ ಲಕ್ಷಣವೇನು? ಇದನ್ನೂ ಸಂಸ್ಕೃತದಲ್ಲಿರುವ ಒಂದು ಸುಭಾಷಿತ ಬಹಳ ಚೆನ್ನಾಗಿ ಹೇಳಿದೆ.

"ಪಾಪಾನ್ನಿವಾರಯತಿ ಯೋಜಯತೇ ಹಿತಾಯ ಗುಷ್ಯಂ ನಿಗೂಡತಿ ಗುಣಾನ್ ಪ್ರಕಟೀಕರೋತಿ। ಆಹದ್ಗತಂ ಚ ನ ಜಹಾತಿ ದದಾತಿ ಕಾಲೇ ಸನ್ಮಿತ್ರ ಲಕ್ಷಣಮಿದಂ ಪ್ರವದಂತಿ ಸಂತಃ ॥"

ಇದರ ಅರ್ಥ- ಒಳ್ಳೆಯ ಸ್ನೇಹಿತನು ನಮ್ಮನ್ನು ಕೆಟ್ಟ ಕೆಲಸಗಳಿಂದ ದೂರ ಮಾಡಿ. ಒಳ್ಳೆಯ ಕೆಲಸಗಳನ್ನು ಮಾಡಲು ಪ್ರೋತ್ಸಾಹಿಸುತ್ತಾನೆ. ನಮ್ಮ ರಹಸ್ಯಗಳನ್ನು ಗುಟ್ಟಾಗಿ ಇರಿಸಿಕೊಂಡು, ಯಾರ ಬಳಿಯಲ್ಲೂ ಹೇಳದೆ, ನಮ್ಮ ಒಳ್ಳೆಯ ಗುಣಗಳನ್ನು ಮಾತ್ರ ಬೇರೆಯವರಿಗೆ ತಿಳಿಸುತ್ತಾನೆ. ನಮಗೆ ಕಷ್ಟ ಬಂದಾಗ ತನ್ನ ಕೈಲಾದ ಸಹಾಯ ಮಾಡುತ್ತಾನೆ. ನಾವು ಕಷ್ಟದಲ್ಲಿದ್ದಾಗ ನಮ್ಮ ಕೈಬಿಟ್ಟು ಓಡಿ ಹೋಗುವುದಿಲ್ಲ. ಇದು ಒಳ್ಳೆಯ ಸ್ನೇಹಿತನ ಲಕ್ಷಣ. ಇಂಥವರನ್ನೇ ಸ್ನೇಹಿತರನ್ನಾಗಿ ಆಯ್ದುಕೊಳ್ಳಿ. ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ. ಕೆಟ್ಟ ಗುಣಗಳುಳ್ಳ ಸ್ನೇಹಿತರು ನಿಮ್ಮ ಆಪರೆ ವಲಯದಲ್ಲಿದ್ದರೆ ಅವರನ್ನು ಕೂಡಲೇ ಫಿಲ್ಟರ್ ಮಾಡಿ ದೂರ ಕಳಿಸಿಬಿಡಿ! ಕೆಟ್ಟವರ ಸಹವಾಸದಿಂದ ದೂರ ಇದ್ದಷ್ಟೂ ಒಳ್ಳೆಯದು.


logoblog

Thanks for reading Friendship: ಸ್ನೇಹಿತರನ್ನು ಎಚ್ಚರಿಕೆಯಿಂದ ಆಯ್ದುಕೊಳ್ಳುವುದೇ ಉತ್ತಮ ಭವಿಷ್ಯಕ್ಕೆ ತಳಪಾಯ

Newest
You are reading the newest post

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ