ಶಿಕ್ಷಕರಿಗೆ ರಿಲೀಫ್ ನೀಡಿದ ಸುಪ್ರೀಂಕೋರ್ಟ್ : 13,352 ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಅಬಾಧಿತ ಹೈಕೋರ್ಟ್ ಆದೇಶ ಎತ್ತಿ ಹಿಡಿದ ಸರ್ವೋಚ್ಚ ನ್ಯಾಯಾಲಯ.
ರಾಜ್ಯದಲ್ಲಿ 13,352 ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ತಡೆ ನೀಡುವ ಬೇಡಿಕೆಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದ್ದು, ನೇಮಕಾತಿ ಮುಂದುವರಿಸಲು ಹೈಕೋರ್ಟ್ ವಿಭಾಗೀಯ ಪೀಠ ನೀಡಿದ್ದ ಆದೇಶವನ್ನು ಮಾನ್ಯಗೊಳಿಸಿದೆ. ಇದರೊಂದಿಗೆ ದೀಪಾವಳಿಯ ಮುನ್ನವೇ ಉದ್ಯೋಗಾಕಾಂಕ್ಷಿಗಳಿಗೆ ಸಂತಸದ ಸುದ್ದಿ ಸಿಕ್ಕಂತಾಗಿದೆ.
ಹೈಕೋರ್ಟ್ ವಿಭಾಗೀಯ ಪೀಠದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ವಿಶೇಷ ಮೇಲ್ಮನವಿಗಳ ವಿಚಾರಣೆ ನಡೆಸಿದ ನ್ಯಾ. ಜೆ.ಕೆ. ಮಹೇಶ್ವರಿ ಮತ್ತು ನ್ಯಾ. ವಿಜಯ್ ಬಿಷ್ಟೋಯ್ ಅವರ ಪೀಠವು, “ನೇಮಕಾತಿ ಪ್ರಕ್ರಿಯೆಯಿಂದ ಉಂಟಾಗುವ ಸೇವಾ ಸಂಬಂಧಿತ ಯಾವುದೇ ದೂರುಗಳನ್ನು ಪರಿಹರಿಸಲು ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಸೂಕ್ತ ವೇದಿಕೆ ಆಗಿದೆ” ಎಂದು ಸ್ಪಷ್ಟಪಡಿಸಿದೆ.
“ಏಕಸದಸ್ಯ ಪೀಠ ನೀಡಿದ್ದ ತೀರ್ಪನ್ನು ರದ್ದುಗೊಳಿಸಿರುವ ವಿಭಾಗೀಯ ಪೀಠದ ಕ್ರಮ ನ್ಯಾಯಸಮ್ಮತವಾಗಿದೆ. ಪ್ರಕರಣವನ್ನು ನ್ಯಾಯಮಂಡಳಿಗೆ ವರ್ಗಾಯಿಸುವಲ್ಲಿ ಯಾವುದೇ ದೋಷ ಇಲ್ಲ. ಹೈಕೋರ್ಟ್ ಮುಂದೆ ಸಲ್ಲಿಸಲಾದ ಅರ್ಜಿಗಳನ್ನು ಪರಿಗಣಿಸಲು ಸಾಧ್ಯವಿಲ್ಲ ಎಂಬ ವಿಭಾಗೀಯ ಪೀಠದ ನಿರ್ಣಯವೂ ಸರಿಯಾಗಿದೆ,” ಎಂದು ತೀರ್ಪು ಬರೆದ ನ್ಯಾಯಮೂರ್ತಿ ವಿಜಯ್ ಬಿಷ್ಟೋಯ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಸೇವಾ ನ್ಯಾಯಮಂಡಳಿಗಳ ವ್ಯಾಪ್ತಿಗೆ ಒಳಪಡುವ ಪ್ರಕರಣಗಳಿಗೆ ಸಂಬಂಧಿಸಿದ ರಿಟ್ ಅರ್ಜಿಗಳನ್ನು ಸಂವಿಧಾನದ 226ನೇ ವಿಧಿಯಡಿ ಹೈಕೋರ್ಟ್‌ಗಳು ಸ್ವೀಕರಿಸಬಾರದು," ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಅಲ್ಲದೆ, ನ್ಯಾಯಮಂಡಳಿಯ ಅಂತಿಮ ತೀರ್ಪಿನ ಪ್ರಕಾರವೇ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಪೀಠ ನಿರ್ದೇಶಿಸಿದೆ.
“ತಾತ್ಕಾಲಿಕ ಆಯ್ಕೆಪಟ್ಟಿಯಿಂದ ಹೊರಗುಳಿದ ಅಭ್ಯರ್ಥಿಗಳು ತಮ್ಮ ಅಸಮಾಧಾನ ಅಥವಾ ತಕರಾರನ್ನು ನ್ಯಾಯಮಂಡಳಿಯ ಮುಂದೆ ಮಂಡಿಸಿ ನ್ಯಾಯ ಪಡೆಯುವ ಅವಕಾಶ ಹೊಂದಿದ್ದಾರೆ,” ಎಂದು ವಿಭಾಗೀಯ ಪೀಠವು 2023ರ ಅಕ್ಟೋಬರ್ 13ರಂದು ನೀಡಿದ ತೀರ್ಪಿನಲ್ಲಿ ಸ್ಪಷ್ಟಪಡಿಸಿತ್ತು.
ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳಲ್ಲಿ 6ರಿಂದ 8ನೇ ತರಗತಿವರೆಗೆ ಒಟ್ಟು 13,352 ಶಿಕ್ಷಕರ ನೇಮಕಾತಿಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ 2022ರ ಮಾರ್ಚ್ 21ರಂದು ಅಧಿಸೂಚನೆ ಪ್ರಕಟಿಸಿತ್ತು. ಅದರ ನಂತರ, 2022ರ ಮೇ ತಿಂಗಳಲ್ಲಿ ಲಿಖಿತ ಪರೀಕ್ಷೆ ನಡೆಸಲ್ಪಟ್ಟು, ನವೆಂಬರ್ 18ರಂದು ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಿಸಲಾಯಿತು.
ಆಯ್ಕೆಪಟ್ಟಿ ತಯಾರಿಸುವ ಸಂದರ್ಭದಲ್ಲಿ ವಿವಾಹಿತ ಮಹಿಳಾ ಅಭ್ಯರ್ಥಿಗಳ ಪತಿಯ ಆದಾಯ ಪ್ರಮಾಣಪತ್ರವನ್ನು ಮಾತ್ರ ಪರಿಗಣಿಸಲಾಗಿತ್ತು. ಆದರೆ ನೇಮಕಾತಿ ಅಧಿಸೂಚನೆಯಲ್ಲಿ ವಿವಾಹಿತ ಮಹಿಳೆಯರು ಕಡ್ಡಾಯವಾಗಿ ಪತಿಯ ಆದಾಯ ಪ್ರಮಾಣಪತ್ರವನ್ನೇ ಸಲ್ಲಿಸಬೇಕು ಎಂಬ ಸ್ಪಷ್ಟ ನಿರ್ದೇಶನ ಇರಲಿಲ್ಲ.
ಈ ಹಿನ್ನೆಲೆಯಲ್ಲಿ, ಅರ್ಹತೆ ಇದ್ದರೂ ಆಯ್ಕೆಪಟ್ಟಿಯಿಂದ ಕೈಬಿಡಲ್ಪಟ್ಟ ಕೆಲವು ಅಭ್ಯರ್ಥಿಗಳು ಹೈಕೋರ್ಟ್‌ನಲ್ಲಿ ದೂರು ದಾಖಲಿಸಿದ್ದರು. ವಿಚಾರಣೆ ನಡೆಸಿದ ಏಕಸದಸ್ಯ ಪೀಠವು, ವಿವಾಹಿತ ಮಹಿಳೆಯ ತಂದೆಯ ಆದಾಯ ಪ್ರಮಾಣಪತ್ರವನ್ನೂ ಪರಿಗಣಿಸಬೇಕು ಎಂದು ಹೇಳಿ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ರದ್ದುಗೊಳಿಸಿತು.
ಕೋರ್ಟ್ ಆದೇಶದಂತೆ ಸರ್ಕಾರ ಆಯ್ಕೆಪಟ್ಟಿಯನ್ನು ಪರಿಷ್ಕರಿಸಿತು. 2023ರ ಮಾರ್ಚ್ 8ರಂದು ಪ್ರಕಟವಾದ ಪರಿಷ್ಕೃತ ಪಟ್ಟಿಯಲ್ಲಿ, ಮೊದಲು ಪ್ರಕಟಿತ ಪಟ್ಟಿಯಲ್ಲಿದ್ದ 451 ಅಭ್ಯರ್ಥಿಗಳನ್ನು ಕೈಬಿಡಲಾಯಿತು. ಅವಕಾಶ ಕಳೆದುಕೊಂಡ ಈ ಅಭ್ಯರ್ಥಿಗಳು ಪರಿಷ್ಕೃತ ಪಟ್ಟಿಯನ್ನು ಪ್ರಶ್ನಿಸಿ ಹೈಕೋರ್ಟ್ ವಿಭಾಗೀಯ ಪೀಠದ ಮೊರೆ ಹೋದರು. ಬಳಿಕ, 2023ರ ಅಕ್ಟೋಬರ್ 13ರಂದು ವಿಭಾಗೀಯ ಪೀಠವು ಏಕಸದಸ್ಯ ಪೀಠದ ಆದೇಶವನ್ನು ರದ್ದುಗೊಳಿಸಿ, ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸಲು ಅನುಮತಿ ನೀಡಿತು. ಜೊತೆಗೆ, ಸಂಬಂಧಿತ ವಿವಾದವನ್ನು ‘ಕೆಎಟಿ’ ವೇದಿಕೆಯಲ್ಲಿ ಇತ್ಯರ್ಥಪಡಿಸಲು ಸೂಚಿಸಿತು. ಈ ಆದೇಶವನ್ನು ಪ್ರಶ್ನಿಸಿ ಅಭ್ಯರ್ಥಿಗಳು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ