Nala charitre: ನಳ ಚರಿತ್ರೆ- ಭಾಗ -01
ಅಂಥ ನಿಷಧ ನಗರವನ್ನು ಪಾಲಿಸುವವನು ನಳನೆಂಬ ರಾಜ. ಚಂದ್ರವಂಶಕ್ಕೆ ರತ್ನಪ್ರಾಯನಾದ ಆತ ಮಹಾ ಪರಾಕ್ರಮಿ ಮತ್ತು ಪರಮ ಧರ್ಮಿಷ್ಟ, ಕಪ್ಪ, ಕಾಣಿಕೆಗಳನ್ನು ಕೊಡುವ ಹಲವು ರಾಜರುಗಳಿಂದ ಅವನ ಆಸ್ಥಾನ ಇಂದ್ರ ಸಭೆಯಂತೆ ಮೆರೆಯುತ್ತಿತ್ತು.
ಇತ್ತ ಕಡೆ ಉತ್ತರದಲ್ಲಿ ವಿದರ್ಭವೆಂಬ ನಗರವಿತ್ತು, ರಮಣೀಯವಾದ ಆ ನಗರ ಹೊಳೆಯುವ ಅಮರಾವತಿಯಂತಿತ್ತು. ಅಲ್ಲಿಗೆ ಅಧಿಪತಿ ಭೀಮನೆಂಬ ರಾಜ. ಅವನು ಧೈರ್ಯವಂತ, ಸದ್ಗುಣಿ, ವೀರ ಮತ್ತು ಸಕಲ ಸೌಭಾಗ್ಯಗಳನ್ನು ಪಡೆದವನು. ಅವನಿಗೆ ದಮಯಂತಿಯೆಂಬ ಒಬ್ಬಳೇ ಮಗಳು. ಅವಳು ಲೋಕೈಕ ಸುಂದರಿ, ರಾಜಭವನದಲ್ಲಿ ಅವಳು ಸರೋವರದಲ್ಲಿ ಆಡುವ ಚೆಲುವಾದ ಹಂಸದಂತೆ ನಲಿದಾಡುತ್ತಿದ್ದಳು.
ಗುಣಶೀಲದಲ್ಲಿಯೇ ಆಗಲಿ, ನುಡಿಯ ರೀತಿ, ಗಾಂಭೀರ್ಯಗಳಲ್ಲಿಯೇ ಆಗಲಿ, ಗುರುಭಕ್ತಿ, ದೈವಭಕ್ತಿಗಳಲ್ಲಿಯೇ ಆಗಲಿ ಅವಳಿಗೆ ಸರಿಸಮಾನರಿಲ್ಲ.
ಆ ಭಾವನೆ ಶೀಲ, ವೈಭವ ಇತ್ಯಾದಿಗಳನ್ನು ಕವಿಗಳು ವರ್ಣಿಸಿ ಕೊಂಡಾಡಿದರು. ಅಲ್ಲಿಯೇ ಒಮ್ಮೆ ಭೀಮರಾಜನ ಓಲಗದಲ್ಲಿ ನಳ ಮಹಾರಾಜನ ಸೌಂದರ್ಯ, ಇದ್ದ ದಮಯಂತಿ ಅದನ್ನೆಲ್ಲಾ ಕೇಳಿಸಿಕೊಂಡಳು. ಅವಳ ಮನಸ್ಸು ಆ ವಿವರಗಳ ಮೇಲೆ ನಳನ ರೂಪನ್ನು ಚಿತ್ರಿಸಿಕೊಳ್ಳತೊಡಗಿತು. ಮೆಚ್ಚಿಗೆಯ ಅವಳ ಅಂತರಂಗದಲ್ಲಿ ನಳನನ್ನು ಕುರಿತಾದ ಮೋಹವಾಗಿ ಮಾರ್ಪಟ್ಟಿತು. ಇಂಥ ಅನುಕೂಲ ಸನ್ನಿವೇಶದಲ್ಲಿ ಮನ್ಮಥ ತನ್ನ ಹೂ ಬಾಣಗಳನ್ನು ದಮಯಂತಿಯ ಮೇಲೆ ಪ್ರಯೋಗಿಸಿದ. ಅನಂತರ ದಮಯಂತಿಯ ಸ್ಥಿತಿ ಚಿಂತಾಜನಕವಾಯಿತು.
ಅವಳ ಕಣ್ಣ ತುಂಬ ಮೋಹದ ಕತ್ತಲೆ ಹೆಚ್ಚಾಯಿತು. ಊಟದಲ್ಲಿ ರುಚಿಯಿಲ್ಲ. ಸಖಿಯರ ಉಪಚಾರದಲ್ಲಿ ಆಸಕ್ತಿಯಿಲ್ಲ. ಬಹಳ ಬೇಸರದಿಂದ ಬಳಲತೊಡಗಿದಳು. ಬಣ್ಣನೆಯ ಮಾತನ್ನೆಲ್ಲ ಮರೆತಳು. ಎಲ್ಲ ಸುಖವನ್ನೂ ತೊರೆದ ದಮಯಂತಿಯ ದೇಹಸೌಂದರ್ಯ ಬಣ್ಣಗುಂದಿತು.
ದಮಯಂತಿಯ ಸ್ಥಿತಿಯನ್ನು ಕಂಡು ಸಖಿಯರು ಆತಂಕಗೊಂಡರು. ಅಂತರಂಗದಲ್ಲಿ ಬಲಿತ ವಿರಹವೇದನೆಯಿಂದ ಸಂಕಟಪಡುವ ಅವಳನ್ನು ಉದ್ಯಾನದಲ್ಲಿ ಕರೆದೊಯ್ದು, ಹೂ ಬಿಟ್ಟ ಮರಗಳ ಎಳೆಚಿಗುರಿನ ನೆರಳಿನಲ್ಲಿ ಕೂರಿಸಿ, ಪರಿಮಳಭರಿತ ಪುಷ್ಪಗಳ ಪನ್ನೀರಿನಿಂದ ಉಪಚರಿಸಿದರು. ದಮಯಂತಿಯ ಸ್ಥಿತಿ ಏಕೆ ಹೀಗಾಯಿತೆಂದು ತಮ್ಮಲ್ಲೇ ಯೋಚಿಸಿದರು. ಕೆಲವರು ಕರ್ಪೂರ ಗಂಧವನ್ನು ಅವಳ ಅಂಗಕ್ಕೆ ಲೇಪಿಸಿದರು. ಕೆಲವರು ಗಾಳಿ ಬೀಸಿದರು. ಕೆಲವರು ಹೂವುಗಳನ್ನೇ ಹಾಸಿದರು.
ಹೀಗೆ ದಮಯಂತಿಗೆ ಹಲವು ರೀತಿಯಲ್ಲಿ, ಶೈತ್ಯೋಪಚಾರ ಮಾಡಿದರು. ಅವಳ ತಾಪ ಹೆಚ್ಚಾಯಿತೇ ಹೊರತು ಕಡಿಮೆಯಾಗಲಿಲ್ಲ. ಬೇರೆ ದಾರಿಯೇನೆಂದು ಸಖಿಯರಿಗೆ ತೋಚಲಿಲ್ಲ. ತಮ್ಮ ಪ್ರಿಯ ಸಖಿಯನ್ನು ಹೀಗೆ ಕೋಟಲೆ ಪಡಿಸುವ ಮನ್ಮಥನು ಕಡುಪಾಪಿಯೆಂದು ಬೈಯುತ್ತ ಅವಳನ್ನು ತೋಪಿನೆಡೆಗೆ ಕರೆತಂದರು. ಅಲ್ಲಿ ಬಕುಳ, ಪಾದರಿ, ಸಂಪಿಗೆ, ಮಾವು, ದಾಳಿಂಬ ಇತ್ಯಾದಿ ಗಿಡಮರಗಳಿದ್ದವು. ಸನಿಹದಲ್ಲೇ ರತ್ನಖಚಿತ ಸೋಪಾನಗಳ ಒಂದು ಸರೋವರವಿತ್ತು. ಅದರಲ್ಲಿ ಅರಳಿದ ಕೆಂದಾವರೆಗೆ ದುಂಬಿಗಳು ಮುತ್ತುತ್ತಿದ್ದವು. ಆಡುತ್ತಿದ್ದ ಹಂಸ ಕೊಕ್ಕರೆ, ಚಕ್ರವಾಕಗಳು ಸರೋವರದ ಅಂದವನ್ನು ಹೆಚ್ಚಿಸಿದ್ದವು. ಸಖಿಯರು ದಮಯಂತಿಯೊಡನೆ ಆ ಸರೋವರದಲ್ಲಿ ಬಹಳಹೊತ್ತು ಜಲಕೇಳಿಯಾಡಿದರು. ನಂತರ ದಡದಲ್ಲಿ ಕುಳಿತು ದಮಯಂತಿಗೆ ಹಲವು ವಿಧವಾದ ವಸ್ತ್ರಭೂಷಣಗಳನ್ನು ತೊಡಿಸಿ ಅವಳ ತಾಪವನ್ನು ನಿವಾರಿಸಲು ಪ್ರಯತ್ನಿಸಿದರು.
ಇತ್ತ ಕಡೆ ಒಂದು ದಿನ ನಳಮಹಾರಾಜ ನಿಷಧ ನಗರಿಯಲ್ಲಿ ರತ್ನಸಿಂಹಾಸನದಲ್ಲಿ ಕುಳಿತು ಓಲಗ ಕೊಡುತ್ತಿದ್ದನು. ಆ ಸಭೆಯಲ್ಲಿ ಗೌಳ, ವಂಗ, ಕಳಿಂಗ, ಚೋಳ ಮುಂತಾದ ನಾಡುಗಳ ಅನೇಕ ಭೂಮಿಪಾಲರಿದ್ದರು. ಸುಂದರ ಬಾಲೆಯರಿದ್ದರು. ಮಂತ್ರಿಗಳೂ, ವೀರರೂ, ನಟರೂ, ಗಾಯಕರೂ - ಮತ್ತು ಕವಿಗಳೂ ತುಂಬಿದ್ದರು.
ಅಂಥ ಸಮಯದಲ್ಲಿ ಹಲವು ದೇಶಗಳ ಯಾತ್ರೆ ಮಾಡಿದ ಒಬ್ಬ ಬ್ರಾಹ್ಮಣ ಆಸ್ಥಾನಕ್ಕೆ ಬಂದ. ಅವನನ್ನು ಕುರಿತು ಹಲವು ವಿಷಯಗಳನ್ನು ಮಾತನಾಡುತ್ತ ನಳಮಹಾರಾಜನು, "ಎಲೈ ಬ್ರಾಹ್ಮಣೋತ್ತಮ, ಜಗತ್ತಿನಲ್ಲಿ ಅತ್ಯಂತ ವಿಚಿತ್ರವಾದ ಸಂಗತಿಯೇನಾದರೂ ನಿಮ್ಮ ಗಮನಕ್ಕೆ ಬಂತೇ?" ಎಂದು ಕೇಳಿದ.
ಅದಕ್ಕೆ ಆ ಬ್ರಾಹ್ಮಣ ಹೀಗೆಂದು ಉತ್ತರವಿತ್ತನು, "ಎಲೈ ರಾಜನೇ ವಿದರ್ಭನಗರದ ಭೀಮರಾಜನಿಗೆ ದಮಯಂತಿಯೆಂಬ ಒಬ್ಬಳೇ ಮಗಳಿದ್ದಾಳೆ. ಅಂಥ ಮಗಳನ್ನು ಪಡೆಯಲು ಅವನು ಎಂಥ ಪುಣ್ಯ ಮಾಡಿದ್ದನೋ ಏನೋ! ಅವಳ ರೂಪ ಗುಣಗಳನ್ನು ವರ್ಣಿಸಲು ನಾನು ಸಮರ್ಥನಲ್ಲ. ಪರಿಶುದ್ಧವಾದ ಆಕಾರದಿಂದ, ಮೃದುವಾದ ಸವಿನುಡಿದಳಿಂದ ಕೂಡಿದ ಅವಳಿಗೆ ಸಮಾನರಾದವರು ಈ ಲೋಕದಲ್ಲಿಯೇ ಇಲ್ಲ. ಅವಳ ಚೆಲುವು, ಕೃಷ್ಣನ ಸೊಸೆಯಾದ ರತಿಯ ಚೆಲುವನ್ನೂ, ಚಂದ್ರನ ಮಗಳ ಚೆಲುವನ್ನೂ ಮರೆಸಿಬಿಡುತ್ತದೆ."
ಬ್ರಾಹ್ಮಣನ ಮಾತುಗಳನ್ನು ಕೇಳುತ್ತ ಕೇಳುತ್ತ ನಳ ಮೆಚ್ಚಿಗೆಯಿಂದ ತಲೆದೂಗಿದ. ಅವನ ಕಣ್ಣುಗಳ ಮುಂದೆ ಆ ಚೆಲುವೆಯಾದ ದಮಯಂತಿ ಗೋಚರಿಸಿದಂತೆ ಭ್ರಮೆಯಾಯಿತು. ಕ್ರಮೇಣ ಮನಸ್ಸಿನಲ್ಲಿ ಮೋಹ ಬೆಳೆದು, 'ಆ ಲಾವಣ್ಯವತಿ ಹೇಗೆ ತಾನೇ ತನ್ನವಳಾದಾಳು' ಎಂದು ಚಿಂತಿಸತೊಡಗಿದ. ಅವಳ ರೂಪ, ಗುಣಗಳ ಒಂದೊಂದು ವಿವರವನ್ನೂ ಮತ್ತೆ ಮತ್ತೆ ನೆನಪಿಸಿಕೊಂಡು ಮನಸ್ಸಿನಲ್ಲೇ ಚಪ್ಪರಿಸಿದ. ಪ್ರತಿ ಕ್ಷಣವೂ ಅವಳ ಚಿಂತೆಯಲ್ಲೇ ವಿರಹದಿಂದ ಕಳವಳಪಡತೊಡಗಿದ. ಅವನ ಶರೀರವೂ ಕೂಡ ಕ್ಷೀಣಿಸತೊಡಗಿತು.
ಇಂಥ ಸಂದರ್ಭದಲ್ಲೆ ಬೇಟೆಗಾರರ ತಂಡ ರಾಜನನ್ನು ಕಾಣಲು ಬಂತು. ವಿವಿಧ ಫಲಗಳನ್ನು, ವಸ್ತುಗಳನ್ನು ಕಾಣಿಕೆಯಾಗಿ ನೀಡಿ, ಬೇಡರ ನಾಯಕ, "ಪ್ರಭು ದುಷ್ಟ ಮೃಗಗಳ ಪೀಡೆ ಹೆಚ್ಚಾಗಿದೆ. ದಯಮಾಡಿ ಹೊರಡಿ” ಎಂದು ಬಿನ್ನವಿಸಿಕೊಂಡ. ದಮಯಂತಿಯ ನೆನಪಿನಲ್ಲಿ ಕಳವಳಿಸುತ್ತಿರುವ ತನ್ನ ಮನಸ್ಸಿನ ವಿರಹವನ್ನು ಮರೆಯಲು ಇದೇ ಉಚಿತವೆಂದು ನಿರ್ಧರಿಸಿಕೊಂಡ ನಳ ತಾನು ಬೇಟೆಗೆ ಹೊರಡುವುದಾಗಿ ಹೇಳಿ ಬೇಡರನ್ನು ಕಳಿಸಿಕೊಟ್ಟ.
ಸೂರ್ಯೋದಯವಾಗುತ್ತಿದ್ದ ಹಾಗೇ ನಳ ಮಹಾರಾಜ ತನ್ನ ಸಕಲ ದಳವನ್ನೂ ಕರೆಸಿದ. ಖಡ್ಗ, ಕಠಾರಿ ಮೊದಲಾದ ವಿವಿಧ ಆಯುಧಗಳಿಂದಲೂ ಬಲೆ, ಕೋಲು, ಕಣ್ಣಿ ಮುಂತಾದ ಬೇಟೆಯ ಸಲಕರಣೆಗಳಿಂದಲೂ ಸಜ್ಜಾದ ವೀರರ ಕಲಕಲದಿಂದ ನಗರದ ಹೊರವಲಯವು ತುಂಬಿಹೋಯಿತು. ರತ್ನಾಭರಣಗಳಿಂದಲೂ, ದಿವ್ಯ ವಸ್ತ್ರಗಳಿಂದೂ, ಸುಗಂಧ ದ್ರವ್ಯಗಳಿಂದಲೂ ಅಲಂಕೃತನಾಗಿ ನಳ ವಾಯುವೇಗದಲ್ಲಿ ಓಡುವ ಕುದುರೆಯೊಂದನ್ನು ಏರಿಕೊಂಡು ಬಂದ. ಹಲವು ವಿಧದ ವಾದ್ಯಘೋಷದೊಂದಿಗೆ ನೆಲ ಬಿರಿಯುವಂತೆ ಸದ್ದು ಮಾಡುತ್ತಾ ಸೈನ್ಯ ಚಲಿಸಿತು.
ಸ್ವಲ್ಪ ಹೊತ್ತಿಗೆ ಬೇಟೆಗಾರರ ಇಡೀ ಪಡೆ ಕಾಡನ್ನು ಹೊಕ್ಕಿತು. ಮೃಗ ಸಮೂಹವನ್ನು ಬಳಸಿತು. ಭಟರ ಉಬ್ಬರವನ್ನು ಎದುರಿಸಲಾರದೆ ಮೃಗಗಳು, ಭಯ ಗಾಬರಿಗಳಿಂದ ದಿಕ್ಕು ದಿಕ್ಕಿಗೆ ನೆಗೆದು ಓಡಿದವು. ಆದರೇನು ! ಆ ವೀರರು ಬಿಡದೆ ಆನೆಗಳನ್ನು, ಹುಲಿ, ಕರಡಿ ಮುಂತಾದ ಅನೇಕ ಪ್ರಾಣಿಗಳನ್ನು ಹೊಡೆದುರುಳಿಸಿದರು. ನಂತರ ಕೆಲವರು ಹತ್ತಿರದ ಗಿರಿಶಿಖರವೊಂದನ್ನೇರಿ. ಅಲ್ಲಿಂದ ಒಟ್ಟಾಗಿ ಬೆಳೆದಿದ್ದ ಮರಗಳ ಗುಂಪಿನ ಮೇಲೆ ಬಲೆಯನ್ನು ಹರಡಿದರು. ಆ ಬಲೆಯೊಳಗೆ ಬರುವಂತೆ ಎಲ್ಲ ಕಡೆಯಿಂದ ಪಾಣಿಗಳನ್ನು ಅಟ್ಟತೊಡಗಿದರು. ಆಗ ಬಲಿಷ್ಠವಾದ ಸಿಂಹವೊಂದು ಸೈನ್ಯವನ್ನು ಗಣಿಸದೆ, ಅಡ್ಡಬಂದವರನ್ನು ಕೆಡಹುತ್ತ ಮುನ್ನುಗ್ಗಿಬರುತ್ತಿತ್ತು. ಎಲ್ಲ ಭಯಗೊಂಡರು. ಆಗ ನಳ ನಿರ್ಭಯವಾಗಿ ಆ ಸಿಂಹವನ್ನು ಬೆನ್ನಟ್ಟಿ ಕೊಂದು ಹಾಕಿದ.
ಅವನ ಶೌರ್ಯವನ್ನು ಕಂಡು ಎಲ್ಲ ಬೆರಗಾದರು.
ಅಷ್ಟರಲ್ಲಿ ಸಂಜೆಯಾಯಿತು. ನಳ ಬೇಟೆಯನ್ನು ನಿಲ್ಲಿಸುವಂತೆ ಸೂಚಿಸಿದ. ಆಯಾಸಗೊಂಡ ತನ್ನ ಸೇನೆಯ ಸಮೇತ, ಹತ್ತಿರದಲ್ಲೇ ಇದ್ದ ಒಂದು ಪಟ್ಟಣದ ಹೊರವಲಯದ ಉದ್ಯಾನದಲ್ಲಿ ಬೀಡು ಬಿಟ್ಟ. ಆದರೆ ಮತ್ತೆ ದಮಯಂತಿಯ ನೆನಪಾಗಿ ಅವನ ವಿರಹ ಅಧಿಕವಾಯಿತು. ಮನೋವ್ಯಥೆಯಿಂದ ಉತ್ಸಾಹಶೂನ್ಯವಾಗಿ, ಕೊಳದಲ್ಲಿಳಿದು ಕೈ ಕಾಲುಗಳನ್ನು ತೊಳೆದುಕೊಂಡ. ಆದರೂ ಸಮಾಧಾನವಾಗದೆ, ಒಂಟಿಯಾಗಿ ಆ ಉದ್ಯಾನದಲ್ಲಿ ಅಡ್ಡಾಡತೊಡಗಿದ.
ಆ ಕೊಳದ ತಡಿಯಲ್ಲಿ ಒಂದು ಕಡೆ ಮರಗಳು ದಟ್ಟವಾಗಿ ಬೆಳೆದಿದ್ದವು.
ಅವುಗಳಲ್ಲಿ ಒಂದು ಮರದ ಕೆಳಗೆ ಅದೇ ತಾನೆ ಹೂಗಳು ಚೆದರಿ ಬಿದ್ದಿದ್ದವು. ಅದೇ ಸ್ಥಳದಲ್ಲೇ ಎಲ್ಲ ಶುಭಗಳಿಗೂ ಮೂಲಸ್ಥಾನದಂತೆ, ಪರಿಶುದ್ಧವಾದ ತೇಜಸ್ಸಿನಿಂದ ಹೊಳೆಯುತ್ತಿದ್ದ ಒಂದು ರಾಜಹಂಸವನ್ನು ನಳ ಕಂಡ. ಕೆಂಪಾದ ಕೊಕ್ಕು ಮತ್ತು ಪಾದಗಳಿಂದ ಬೆಳ್ಳಗೆ ಹೊಳೆಯುವ ಗರಿ ಮತ್ತು ದೇಹದಿಂದ ಶೋಭಿಸುತ್ತಿದ್ದ ಆ ಹಂಸವನ್ನು ಕಂಡ ನಳ ಆಶ್ಚರ್ಯಚಕಿತನಾದ. “ಶಿವ ಶಿವಾ! ಇದರ ಅಪೂರ್ವ ಚೆಲುವಿನ ರಹಸ್ಯವನ್ನು ಆ ಪರಮಾತ್ಮನೇ ಬಲ್ಲ !" ಎಂದು - ಉದ್ದರಿಸಿ, ಪ್ರೀತಿಯಿಂದ ಅದನ್ನು ಮೆಲ್ಲಗೆ ಹಿಡಿದುಕೊಂಡ.
–
ಬೆದರಿದ ಹಂಸ ನಳನ ಕೈಯಿಂದ ತಪ್ಪಿಸಿಕೊಳ್ಳಲು ಒದರಿ ಕುಣಿಯಿತು.
ಆದರೆ ಅವನು ಅದನ್ನು ಅಲುಗಾಡದಂತೆ ಬಲವಾಗಿ ಹಿಡಿದ. ಅದು ಅವನ ಮುಖವನ್ನು ನೋಡಿ ಬಹಳವಾಗಿ ಹೆದರಿಕೊಂಡಿತು. ನಂತರ ಎದೆ ಕರಗುವ ದನಿಯಲ್ಲಿ ಅದು ಹೀಗೆ ಹೇಳಿತು; "ಮದಿಸಿದ ಆನೆಗೆ ಸೊಳ್ಳೆಯೊಂದು ಯಾವ ಲೆಕ್ಕ? ಕೈಸದರದವರನ್ನು ಕೊಲ್ಲುವುದೇನು ಅಸಾಧ್ಯವೇ? ಆನೆಗಳನ್ನೇ ಕೊಲ್ಲಬಲ್ಲ ಸಿಂಹಕ್ಕೆ ನರಿಯೊಂದು ಈಡೇ? ನಾನೊಂದು ನಿನಗೆ ಲೆಕ್ಕವೇ? ನಿನ್ನ ಈ ಕೃತ್ಯವನ್ನು ನೋಡಿ ಬೇರೆಯವರು ಹಾಸ್ಯ ಮಾಡಿ ನಗುವುದಿಲ್ಲವೇ? - ನಿನ್ನಂಥ ವೀರನಾದ ರಾಜ ಅರಿಭಯಂಕರನಾಗಿ ಶತ್ರುಗಳನ್ನು ಕೊಲ್ಲುವುದು ನೀತಿ. ಅದನ್ನು ಬಿಟ್ಟು ನೀನು ಹೀಗೆ ಮಾಡಬಹುದೆ? ಪರಹಿಂಸೆಯೆಂಬುದು ಕೆಡಹುತ್ತ ಮುನ್ನುಗ್ಗಿಬರುತ್ತಿತ್ತು. ಎಲ್ಲ ಭಯಗೊಂಡರು. ಆಗ ನಳ ನಿರ್ಭಯವಾಗಿ ಆ ಸಿಂಹವನ್ನು ಬೆನ್ನಟ್ಟಿ ಕೊಂದು ಹಾಕಿದ.
ಅವನ ಶೌರ್ಯವನ್ನು ಕಂಡು ಎಲ್ಲ ಬೆರಗಾದರು.
ಅಷ್ಟರಲ್ಲಿ ಸಂಜೆಯಾಯಿತು. ನಳ ಬೇಟೆಯನ್ನು ನಿಲ್ಲಿಸುವಂತೆ ಸೂಚಿಸಿದ.
ಆಯಾಸಗೊಂಡ ತನ್ನ ಸೇನೆಯ ಸಮೇತ, ಹತ್ತಿರದಲ್ಲೇ ಇದ್ದ ಒಂದು ಪಟ್ಟಣದ ಹೊರವಲಯದ ಉದ್ಯಾನದಲ್ಲಿ ಬೀಡು ಬಿಟ್ಟ. ಆದರೆ ಮತ್ತೆ ದಮಯಂತಿಯ ನೆನಪಾಗಿ ಅವನ ವಿರಹ ಅಧಿಕವಾಯಿತು. ಮನೋವ್ಯಥೆಯಿಂದ ಉತ್ಸಾಹಶೂನ್ಯವಾಗಿ, ಕೊಳದಲ್ಲಿಳಿದು ಕೈ ಕಾಲುಗಳನ್ನು ತೊಳೆದುಕೊಂಡ. ಆದರೂ ಸಮಾಧಾನವಾಗದೆ, ಒಂಟಿಯಾಗಿ ಆ ಉದ್ಯಾನದಲ್ಲಿ ಅಡ್ಡಾಡತೊಡಗಿದ.
ಆ ಕೊಳದ ತಡಿಯಲ್ಲಿ ಒಂದು ಕಡೆ ಮರಗಳು ದಟ್ಟವಾಗಿ ಬೆಳೆದಿದ್ದವು.
ಅವುಗಳಲ್ಲಿ ಒಂದು ಮರದ ಕೆಳಗೆ ಅದೇ ತಾನೆ ಹೂಗಳು ಚೆದರಿ ಬಿದ್ದಿದ್ದವು.
ಅದೇ ಸ್ಥಳದಲ್ಲೇ ಎಲ್ಲ ಶುಭಗಳಿಗೂ ಮೂಲಸ್ಥಾನದಂತೆ, ಪರಿಶುದ್ಧವಾದ ತೇಜಸ್ಸಿನಿಂದ ಹೊಳೆಯುತ್ತಿದ್ದ ಒಂದು ರಾಜಹಂಸವನ್ನು ನಳ ಕಂಡ. ಕೆಂಪಾದ ಕೊಕ್ಕು ಮತ್ತು ಪಾದಗಳಿಂದ ಬೆಳ್ಳಗೆ ಹೊಳೆಯುವ ಗರಿ ಮತ್ತು ದೇಹದಿಂದ ಶೋಭಿಸುತ್ತಿದ್ದ ಆ ಹಂಸವನ್ನು ಕಂಡ ನಳ ಆಶ್ಚರ್ಯಚಕಿತನಾದ. “ಶಿವ ಶಿವಾ! ಇದರ ಅಪೂರ್ವ ಚೆಲುವಿನ ರಹಸ್ಯವನ್ನು ಆ ಪರಮಾತ್ಮನೇ ಬಲ್ಲ !” ಎಂದು ಉದ್ಧರಿಸಿ, ಪ್ರೀತಿಯಿಂದ ಅದನ್ನು ಮೆಲ್ಲಗೆ ಹಿಡಿದುಕೊಂಡ.
ಬೆದರಿದ ಹಂಸ ನಳನ ಕೈಯಿಂದ ತಪ್ಪಿಸಿಕೊಳ್ಳಲು ಒದರಿ ಕುಣಿಯಿತು.
ಆದರೆ ಅವನು ಅದನ್ನು ಅಲುಗಾಡದಂತೆ ಬಲವಾಗಿ ಹಿಡಿದ. ಅದು ಅವನ ಮುಖವನ್ನು ನೋಡಿ ಬಹಳವಾಗಿ ಹೆದರಿಕೊಂಡಿತು. ನಂತರ ಎದೆ ಕರಗುವ ದನಿಯಲ್ಲಿ ಅದು ಹೀಗೆ ಹೇಳಿತು; "ಮದಿಸಿದ ಆನೆಗೆ ಸೊಳ್ಳೆಯೊಂದು ಯಾವ ಲೆಕ್ಕ? ಕೈಸದರದವರನ್ನು ಕೊಲ್ಲುವುದೇನು ಅಸಾಧ್ಯವೇ? ಆನೆಗಳನ್ನೇ ಕೊಲ್ಲಬಲ್ಲ ಸಿಂಹಕ್ಕೆ ನರಿಯೊಂದು ಈಡೇ? ನಾನೊಂದು ನಿನಗೆ ಲೆಕ್ಕವೇ? ನಿನ್ನ ಈ ಕೃತ್ಯವನ್ನು ನೋಡಿ ಬೇರೆಯವರು ಹಾಸ್ಯ ಮಾಡಿ ನಗುವುದಿಲ್ಲವೇ? ನಿನ್ನಂಥ ವೀರನಾದ ರಾಜ ಅರಿಭಯಂಕರನಾಗಿ ಶತ್ರುಗಳನ್ನು ಕೊಲ್ಲುವುದು ನೀತಿ. ಅದನ್ನು ಬಿಟ್ಟು ನೀನು ಹೀಗೆ ಮಾಡಬಹುದೆ? ಪರಹಿಂಸೆಯೆಂಬುದು ದೋಷ, ನನ್ನನ್ನು ಬಿಟ್ಟು ಬಿಡು, ರಾಜನೇ, ಬಡವನಿಗೆ ಔತಣ ಮಾಡಿಸಲು ಒಂದು ಕುಡಿಕೆ ಹಾಲು ಸಾಕಾಗುವುದೇ? ಮಂಜುಸುರಿದ ಕೂಡಲೇ ಕೆರೆ ತುಂಬುವುದೇ? ನನ್ನನ್ನು ತಿಂದರೆ ನಿನ್ನ ಹೊಟ್ಟೆಗೆ ತೃಪ್ತಿಯಾಗುತ್ತದೆಯೇ? ನನ್ನ ಮಡದಿ ಮಕ್ಕಳ ದುಃಖವನ್ನಾದರೂ ಊಹಿಸಿ ನನ್ನನ್ನು ಬಿಟ್ಟುಬಿಡು. ಮರ ಹತ್ತಿದವರನ್ನು, ಹುತ್ತವೇರಿದವರನ್ನು, ಯುದ್ಧದಲ್ಲಿ ಶರಣಾರವರನ್ನು, ಆಯುಧ ಮುರಿದವರನ್ನು, ಗಾಢ ನಿದ್ರೆಯಲ್ಲಿರುವವರನ್ನು ಕೊಲ್ಲುವುದು ನ್ಯಾಯವೇ?" ಹೀಗೆ ಆ ಹಂಸ ಪರಿಪರಿಯಲ್ಲಿ ಬೇಡಿಕೊಂಡಿತು.
ನಳನಿಗೆ ನಾಚಿಕೆಯಾಯಿತು. ಹಂಸದ ನಡವಳಿಕೆಯನ್ನು ಮೆಚ್ಚಿಕೊಂಡನು. "ನಿನ್ನನ್ನು ಕೊಲ್ಲಲೆಂದು ನಾನು ಹಿಡಿಯಲಿಲ್ಲ. ನೀನು ನಿನ್ನ ಮನೆಗೆ ಹೋಗಬಹುದು" ಎಂದು ಬಿಟ್ಟ ಕೂಡಲೇ ಹಂಸ ರೆಕ್ಕೆ ಬಡಿದು ಹಾರಿತು. ಆದರೆ ತಕ್ಷಣವೇ ಮತ್ತೆ ಹಿಂದಿರುಗಿ ಬಂದು ರಾಜನ ತೀರ ಹತ್ತಿರದಲ್ಲೇ ಕುಳಿತು ಹೇಳಿತು. "ಎಲೈ ರಾಜನೇ ನೀನು ನನ್ನ ಪ್ರಾಣ ರಕ್ಷಿಸಿ ಉಪಕಾರ ಮಾಡಿದೆ. ಆದ್ದರಿಂದ ನಾನೂ ನಿನಗೊಂದು ಉಪಕಾರ ಮಾಡುತ್ತೇನೆ."
“ಯಾವ ಉಪಕಾರ?” ಎಂದು ನಳ ಕುತೂಹಲದಿಂದ ಕೇಳಿದ.
"ಸಾರಾಸಾರ ತಿಳಿವಳಿಕೆಯುಳ್ಳ ರಾಜನೇ, ನಾನು ಈಗ ವಿವರವಾಗಿ ಹೇಳುವ ಮಾತನ್ನು ಗಮನವಿಟ್ಟು ಕೇಳು. ಜಗತ್ತಿನಲ್ಲಿ ನಿನ್ನಂಥ ಪರಮ ಪುಣ್ಯಶಾಲಿಗಳು ಬೇರೆ ಯಾರಿದ್ದಾರೆ? ಇಲ್ಲಿಗೆ ದೂರದಲ್ಲಿ ದೇವಲೋಕದಂತಿರುವ ವಿದರ್ಭ ನಗರವಿದೆ. ಭೀಮ ಅಲ್ಲಿನ ದೊರೆ. ದಮಯಂತಿ ಅವನ ಮಗಳು. ಪರಮಪುಣ್ಯಶಾಲಿ, ಮಹಾ ಸುಂದರಿ, ಜಾಣೆ, ಗಜಗಮನೆ, ಮೃದು ಗುಣವುಳ್ಳವಳು. ಅವಳು ನಿಜವಾಗಲೂ ಸೊಬಗಿನ ಸೋನೆ. ಅವಳ ಚೆಲುವನ್ನು ವರ್ಣಿಸಲಾಗದು. ಅದೊಂದು ಅತಿಯಾದ ಸೋಜಿಗವೆಂದೇ ಹೇಳಬೇಕು. ಆ ದಮಯಂತಿ ಯೌವನದ ರೂಪ ರೇಖೆಗಳಿಂದ, ನಗೆಮೊಗದಿಂದ, ಹೊನ್ನಿನಂಥ ಮೈಕಾಂತಿಯಿಂದ, ಮಿಂಚಿನಂಥ ಬೊಗಸೆಗಣ್ಣುಗಳಿಂದ, ಸಣ್ಣ ನಡುವಿನಿಂದ, ಹೊಳೆವ ಉಗುರುಗಳಿಂದ ಅವಳು ಬೆಡಗಿನಿಂದ ರಂಜಿಸುತ್ತಿದ್ದಾಳೆ. ಭೂಲೋಕದಲ್ಲಿರುವ ಸ್ತ್ರೀಯರಲ್ಲಾಗಲಿ, ಅಮರಾವತಿಯಲ್ಲಿರುವ ಹೆಣ್ಣುಗಳಲ್ಲಾಗಲಿ, ಪಾತಾಳದಲ್ಲಿರುವ ನಾರಿಯರಲ್ಲಾಗಲೀ, ಅವಳಿಗೆ ಸರಿ ಸಮಾನರಾದವರು ಯಾರೂ ಇಲ್ಲ. ನೀನಾದರೋ ರೂಪಿನಲ್ಲಿ ಅತಿ ಚೆಲುವ ನಿನಗೆ ಅವಳೇ ಸರಿಸಮಾನಳು. ನಿನ್ನ ಹೊರತು ಅವಳಿಗೆ ರಮಣನಾಗಬಲ್ಲ ಬೇರೆ ಯಾರನ್ನೂ ನಾನು ಕಾಣೆ. ಅವಳು ನಿನಗೆ ಒಲಿಯುವಂತೆ ಮಾಡುತ್ತೇನೆ. ಶಿವನ ಕೃಪೆ ನಿನಗಿದೆ. ನಾನು ಸುಳ್ಳುಹೇಳುವುದಿಲ್ಲ. ನನ್ನ ಮಾತನ್ನು ನಂಬು" ಎಂದು ಹಂಸ ಹೇಳಿತು.
ನಸು ನಕ್ಕ ನಳಮಹಾರಾಜ ಹಂಸದ ಸವಿನುಡಿಗೆ ಮಾರುಹೋದ. ವಿರಹದಿಂದ ಆತುರಗೊಂಡು ಸಂಕೋಚದಿಂದ ಹಂಸಕ್ಕೆ ಹೀಗೆ ಹೇಳಿದ. "ಎಲೈ ಪಕ್ಷಿರಾಜ, ಮನ್ಮಥ ಬಾಣದ ಏಟಿನಿಂದ ನಾನು ನೊಂದಿದ್ದೇನೆ. ಈ ದೇಹದ ತಾಪವನ್ನು ಸೈರಿಸಲಾರೆ. ಕರುಣೆಯಿಂದ ಆ ವನಿತೆಯನ್ನು ನನ್ನೊಡನೆ ಸೇರಿಸಿ ನನ್ನ ಪ್ರಾಣವನ್ನು ರಕ್ಷಿಸು, ನನಗೆ ನೀನೇ ಪರಮ ಬಾಂಧವ. ನನ್ನ ಮನಸ್ಸಿಗೆ ಸಂತೋಷವಾಗುವಂತೆ ಮಾಡು. ಹೋಗು, ಈಗಲೇ ಹೋಗು. ನೀನು ಮರಳಿ ಬರುವವರೆಗೂ ನಾನು ಇಲ್ಲೇ ಕಾದಿರುತ್ತೇನೆ."
ಆ ಹಂಸ ನಳನಿಂದ ಬೀಳ್ಕೊಂಡು ವಾಯುವೇಗದಿಂದ ಹಾರಿ ಹೋಯಿತು. ಚೆಲುವೆಯಾದ ದಮಯಂತಿಯ ಮುಂದಿನ ಪತಿಯ ಕೀರ್ತಿ ವಿಶಾಲವಾದ ಹಾಗೆ ಆ ರಾಜಹಂಸ ಗಗನದ ವಿಶಾಲ ಬಯಲಿನಲ್ಲಿ ಹಾರಿ, ವಿದರ್ಭನಗರವನ್ನು ಕಂಡು ಅಲ್ಲಿಳಿಯಿತು. ಕನಕಮಣಿನಿರ್ಮಿತವಾದ ಸೌಧಗಳಿಂದಲೂ, ಜನಸಮೂಹದಿಂದಲೂ, ಬೀದಿಗಳಿಂದಲೂ, ಉಪವನಗಳಿಂದಲೂ ಆ ನಗರ ಮೆರೆಯುತ್ತಿತ್ತು. ಅಲ್ಲಿ ಮದನನ ಹರಿತವಾದ ಬಾಣದ ಆಘಾತದಿಂದ ಬಳಲುತ್ತಿರುವ ದಮಯಂತಿಯನ್ನು ಕಂಡಿತು. ಅವಳು ನೀಲ ಮಣಿಯ ಗೋಡೆಗಳ, ಹವಳದ ಬೋದಿಗೆಯಿಂದ ಕೂಡಿದ ಮಣಿಮಂಟಪದಲ್ಲಿ ಮಂಚದ ಮೇಲೆ ಕುಳಿತು, ನಳನ ಧ್ಯಾನದಲ್ಲೇ ಮುಳುಗಿದ್ದಳು. ಅವಳು ಚಂದ್ರನಂತೆ ವಿಶಾಲವಾದ ಹಣೆಯಲ್ಲಿ ಕಸ್ತೂರಿಯ ತಿಲಕವಿಟ್ಟಿದ್ದಳು. ಕೊರಳಲ್ಲಿ ಮುತ್ತಿನ ಹಾರವಿತ್ತು. ಬೆರಳುಗಳಲ್ಲಿ ರತ್ನದ ಉಂಗುರಗಳಿದ್ದವು. ಸುವರ್ಣದ ಬಳೆಗಳನ್ನು ತೊಟ್ಟಿದ್ದಳು. ನಿರಿಹಿಡಿದ ದಿವ್ಯವಸ್ತ್ರವನ್ನು ಧರಿಸಿದ್ದಳು. ಕಾಲಲ್ಲಿ ನೂಪುರವಿದ್ದವು. ಆ ದಮಯಂತಿ ತನ್ನ ಗೆಳತಿಯರ ನಡುವೆ ಕುಳಿತಿದ್ದಳು.
ಆಕಾಶದಿಂದ ನೆಲಕ್ಕಿಳಿದು ಆ ತರುಣಿಯರ ಸಭೆಯಲ್ಲಿ ಬಂದು ಕುಳಿತವು. ದಮಯಂತಿ ರಾಜಹಂಸವನ್ನು ಕಂಡು, ತನ್ನ ಗೆಳತಿಯರೊಡನೆ ಅದರ ಅತಿಶಯವಾದ ಚೆಲುವನ್ನು ಬಣ್ಣಿಸುತ್ತ ಅದನ್ನು ಹಿಡಿಯಲು ಮುಂದಾದಳು. ಮೆಲ್ಲ ಮೆಲ್ಲಗೆ ಹೆಜ್ಜೆಯಿಡುತ್ತ ತನ್ನ ಕೋಮಲವಾದ ಕೈಗಳನ್ನು ಚಾಚಿದಳು. ಅವಳ ಕಾಲಿನ ನೂಪುರ ಘಲು ಘಲಿರೆಂದು ಸದ್ದು ಮಾಡುತ್ತಿತ್ತು. ಆದರೆ ಆ ಹಂಸ ಅವಳ ಕೈಗೆ ಸಿಗದೆ ಅತ್ತಿತ್ತ ಸರಿಯುತ್ತ ಹೂಗಳಿಂದ ಕೂಡಿದ ಒಂದು ಮಲ್ಲಿಗೆ ಮೊದರಿನೊಳಗೆ ಸೇರಿಕೊಂಡಿತು. ಗೆಳತಿಯರನ್ನು ಪಕ್ಕಕ್ಕೆ ತಳ್ಳಿ ಹಂಸವನ್ನು ಹಿಡಿಯಲು ತಾನೇ ಪೊದರಿನೊಳಗೆ ಹೊಕ್ಕಳು. ಅವಳ ಬಟ್ಟೆ ಜಾರಿತು. ತಲೆಗೆದರಿತು. ಬೆವರಿನಿಂದ ತೊಯ್ದು ಅವಳು ಆಯಾಸದಿಂದ ನಿಟ್ಟುಸಿರು ಬಿಡುತ್ತ ನಿಂತಳು.
ಆಗ ಹಂಸವು ಅವಳಿಗೆ ಹೀಗೆ ಹೇಳಿತು. "ಎಲೈ ಸುಂದರಿ, ನೀನು ಬಯಸಿ ನನ್ನನ್ನು ಹಿಡಿಯಬೇಕೆಂಬ ಈ ಹಟವೇಕೆ? ಆಕಾಶದಲ್ಲಿ ಹಾರಾಡುವ ಹಕ್ಕಿಗಳು ನಾವು, ನಿನ್ನ ಕೈಗೆ ನಿಲುಕಲಾರೆವು. ಸುಮ್ಮನೆ ವ್ಯರ್ಥವಾಗಿ ಬಳಲಬೇಡ. ನಾನು ಬಂದ ಕಾರಣವನ್ನು ಹೇಳುತ್ತೇನೆ. ಕೇಳು. ನಾನು ನಳ ಚಕ್ರವರ್ತಿಯ ಬಳಿ ಅವನ ವಾಹನವಾಗಿದ್ದೇನೆ. ಅವನು ಅತ್ಯಂತ ಪ್ರೀತಿಯ ಮಾತುಗಳಿಂದ ನನ್ನನ್ನು ಸಲಹುತ್ತಾನೆ. ಅವನದು ನಳಕೂಬರ, ಜಯಂತ ಮತ್ತು ಮನ್ಮಥನನ್ನೂ ಮೀರಿಸುವಂಥ ಸೌಂದರ್ಯ. ನಿನ್ನ ರೂಪಿಗೂ, ನಳನ ಸೌಂದರ್ಯಕ್ಕೂ ಸರಿಹೋಗುತ್ತದೆ. ನಿಮ್ಮಿಬ್ಬರಿಗೆ ಜಗತ್ತಿನಲ್ಲಿ ಬೇರೆ ಯಾರೂ ಸರಿಸಾಟಿಯಿಲ್ಲ."
ಈ ಮಾತುಗಳನ್ನು ಕೇಳಿ ದಮಯಂತಿ ನಾಚಿ ನಸುನಕ್ಕಳು. ಆ ಹಂಸಕ್ಕೆ ಶಿರಬಾಗಿ ನಮಿಸಿ, ವಿನಯದಿಂದ ಹೀಗೆ ಹೇಳಿದಳು, "ಪರಮಗುಣ ನಿಧಿಯಾದ ಪಕ್ಷಿಯೇ ಕೇಳು, ಪರಮ ಪಾತಕಿಯಾದ ಮನ್ಮಥ ನಿಷ್ಕರುಣೆಯಿಂದ ತನ್ನ ಪುಷ್ಪ ಬಾಣವನ್ನು ಬಿಟ್ಟು, ನನ್ನ ದೇಹ ಬಹಳ ನೊಂದಿದೆ. ತನ್ನ ಕರುಣರಸಧಾರೆಯಿಂದ ಈ ತಾಪವನ್ನು ಪರಿಹರಿಸುವಂತೆ ಆ ನಳಮಹಾರಾಜನಿಗೆ ದಯಮಾಡಿ ಬಿನ್ನಯಿಸು. ಬೇರೆಯವರ ದುಃಖವನ್ನು ಪರಿಹರಿಸಿ, ಉಪಕಾರ ಮಾಡುವುದು ಪರಮ ಪುಣ್ಯದ ಕಾರ್ಯವೆಂದು ಹಿರಿಯರು ಹೇಳುತ್ತಾರೆ. ಈಗ ನೀನೇ ನನಗೆ ಪರಮ ಬಂಧು. ವಿರಹದಿಂದ ನೊಂದಿರುವ ನನಗೆ ಇಷ್ಟು ಉಪಕಾರ ಮಾಡಿ ಸಲಹು, ಹೆಚ್ಚೇನು ಹೇಳಲಿ, ನಳನೃಪನೇ ನನ್ನ ಪತಿ, ಉಳಿದ ಭೂಮಂಡಲದ ಎಲ್ಲ ಪುರುಷರೂ ನನಗೆ ಪಿತೃಸಮಾನವೆಂದು ತಿಳಿ.
ದಮಯಂತಿಯ ಹೃದಯದ ಅತಿಶಯವಾದ ಅನುರಾಗವನ್ನು ಕಂಡು ತಾನು ಕೈಗೊಂಡ ಕಾರ್ಯ ಸಫಲವಾಯಿತೆಂದು ಹಂಸ ಮನಸ್ಸಿನಲ್ಲೇ ಸಂತೋಷಗೊಂಡಿತು. ಅವಳನ್ನು ಹತ್ತಿರ ಕರೆದು, “ಆ ನಳಮಹಾರಾಜನೇ ನಿನ್ನ ಪತಿಯಾಗುವಂತೆ ಮಾಡುತ್ತೇನೆ, ಅಂಜದಿರು" ಎಂದು ಧೈರ್ಯ ಹೇಳಿತು. ನಂತರ ನಳನ ಬಗ್ಗೆ, ತನಗೆ ತಿಳಿದ ಎಲ್ಲ ವಿಷಯಗಳನ್ನೂ ವಿವರಿಸಿ, ಹಂಸ ದಮಯಂತಿಯನ್ನು ಸಂತೈಸಿತು. ನಂತರ ದಮಯಂತಿಯ ಚಿಂತೆಯಲ್ಲೇ ಇರುವ ನಳನನ್ನು ಸಮಾಧಾನ ಪಡಿಸಲೆಂದು ತನ್ನ ಪರಿವಾರಸಹಿತವಾಗಿ ನಿಷಧನಗರದ ಕಡೆಗೆ ಹೊರಟಿತು.
No comments:
Post a Comment